ಕೃಷ್ಣರಾವ್, ಎಂ ವಿ
1901-1971. ಕರ್ಣಾಟಕದ ಪ್ರಖ್ಯಾತ ಇತಿಹಾಸಜ್ಞ, ರಾಜನೀತಿಜ್ಞ; ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೊದಲು ರಾಜ್ಯಶಾಸ್ತ್ರದ ಉಪಪ್ರಾಧ್ಯಾಪಕರೂ ಅನಂತರ ಇತಿಹಾಸದ ಪ್ರಾಧ್ಯಾಪಕರೂ ಆಗಿದ್ದವರು.

	ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಖ್ಯಾತ ವಿದ್ವಾಂಸ ಥಾಮಸ್ ಡೆನ್‍ಹ್ಯಾಂ, ಸಿ.ಆರ್. ರೆಡ್ಡಿ, ರಾಧಾಕುಮುದ ಮುಖರ್ಜಿ, ಎಸ್.ವಿ. ವೆಂಕಟೇಶ್ವರ, ಎಂ.ಎಚ್. ಕೃಷ್ಣ ಮೊದಲಾದವರ ಶಿಷ್ಯರಾಗಿದ್ದು, ಅವರಿಂದ ಜೀವನದ ವಿಶಾಲದೃಷ್ಟಿ, ವಿದ್ಯಾರ್ಜನೆಯಲ್ಲಿ ಆಳವಾದ ಸಂಶೋಧನಾತ್ಮಕ ಆಸಕ್ತಿ ಮತ್ತು ಪ್ರೌಢವಾದ ವಿದ್ವತ್ತನ್ನು ಗಳಿಸಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಗೆ ಸೇರಿದ ತರುವಾಯ ರಾಜ್ಯಶಾಸ್ತ್ರದಲ್ಲಿ ಹೆಚ್ಚಿನ ಪಾಂಡಿತ್ಯ ಗಳಿಸುವ ದೃಷ್ಟಿಯಿಂದ ಲಂಡನಿಗೆ ತೆರಳಿ, ಲಾಸ್ಕಿಯ ಶಿಷ್ಯರಾದರು. ಇದರ ಫಲವಾಗಿ ಗ್ರೋತ್ ಆಫ್ ಲಿಬರಲಿಸಂ ಇನ್ ಇಂಡಿಯ ಇನ್ ದಿ ನೈನ್‍ಟೀನ್ತ್ ಸೆಂಚುರಿ ಎಂಬ ಗ್ರಂಥ ರಚಿಸಿದರು.

	ಹೀಗೆ ತಮ್ಮ ಪಾಂಡಿತ್ಯಕ್ಕೆ ಭದ್ರ ಬುನಾದಿಯನ್ನು ಒದಗಿಸಿಕೊಂಡ ಅನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಶೋಧನೆ ಮತ್ತು ಬೋಧನೆಯಲ್ಲಿ ನಿರತರಾದರು. ವಿದ್ಯಾರ್ಥಿಗಳ ಮೇಲೆ, ಸಹಾಧ್ಯಾಪಕರ ಮೇಲೆ ಇವರು ಪ್ರಭಾವ ಬೀರಿದರು. ಇವರು ಒಳ್ಳೆಯ ವಾಗ್ಮಿತೆಯನ್ನೂ ವಿಷಯದ ಮೇಲೆ ಪ್ರಭುತ್ವವನ್ನೂ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹುದ್ದೆಯಿಂದ 1956ರಲ್ಲಿ ಇವರು ನಿವೃತ್ತರಾದರೂ ಅನಂತರ ಒಂದೂವರೆ ದಶಕಗಳ ಕಾಲ ಕರ್ಣಾಟಕದ ಇತಿಹಾಸ, ಸಂಸ್ಕøತಿಗಳ ವಿಚಾರವಾಗಿ ಆಳವಾದ ಅಧ್ಯಯನ ಸಂಶೋಧನೆಗಳಲ್ಲಿ ನಿರತರಾಗಿದ್ದರಲ್ಲದೆ ಬೆಂಗಳೂರಿನ ಕಾಲೇಜೊಂದರಲ್ಲಿ ಅಧ್ಯಾಪಕ ವೃತ್ತಿಯನ್ನು ಮುಂದುವರಿಸಿದರು. ಬೆಂಗಳೂರು ನಗರದ ಅನೇಕ ಪ್ರಮುಖ ಐತಿಹಾಸಿಕ-ಸಾಂಸ್ಕøತಿಕ ಸಭೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷತೆ, ಪ್ರೌಢಾಶಾಲಾ ಉಪಾಧ್ಯಾಯ ಸಂಘದ ಅಧ್ಯಕ್ಷತೆÉ, ಮಿಥಿಕ್ ಸೊಸೈಟಿಯ ಅಧ್ಯಕ್ಷಪದ, ಆಚಾರ್ಯ ತುಳಸಿಯವರಿಂದ ಪ್ರಚಲಿತವಾದ ಅಣುವ್ರತ ಸಮಿತಿಯ ಕರ್ಣಾಟಕ ಸಮಿತಿಯ ನಿರ್ದೇಶಕತ್ವ-ಇವು ಇವರ ಚಟುವಟಿಕೆಗಳಲ್ಲಿ ಕೆಲವು. ಕೃಷ್ಣರಾಯರು 1971ರಲ್ಲಿ ಮೃತರಾದರು.

	ವಿದ್ವತ್ ಲೋಕಕ್ಕೆ ಇವರ ಕೊಡುಗೆ ಗಮನಾರ್ಹ. ಕೌಟಿಲ್ಯನ ಅರ್ಥಶಾಸ್ತ್ರವನ್ನು ಕುರಿತ ಇವರ ಸಂಶೋಧನಾತ್ಮಕ ಲೇಖನಗಳು ಪುರಾತನ ಭಾರತೀಯ ರಾಜನೀತಿಯ ಅಧ್ಯಯನಕ್ಷೇತ್ರದಲ್ಲಿ ಉತ್ತಮ ಕೊಡುಗೆಗಳಾಗಿವೆ. 19ನೆಯ ಶತಮಾನದಲ್ಲಿ ಭಾರತದ ರಾಜಕಾರಣದಲ್ಲಿ ಬೆಳೆದುಬಂದ ಉದಾರತಾವಾದದ ಮೇಲಿನ ಇವರ ಅಧ್ಯಯನ ಉತ್ತಮವಾದ ಶಾಸ್ತ್ರೀಯ ಬರವಣಿಗೆಗೂ ಭಾಷಾಪ್ರೌಢಿಮೆಗೂ ಹೆಸರಾಗಿದೆ. ಪ್ರಾಚೀನ ಕರ್ಣಾಟಕದಲ್ಲಿ 7 ಶತಮಾನಗಳ ಕಾಲ ರಾಜ್ಯವಾಳಿ ಆ ಸಂಸ್ಕøತಿಯ ಬೆಳವಣಿಗೆಗೆ ಗಮನಾರ್ಹ ಕಾಣಿಕೆ ನೀಡಿದ ಗಂಗವಂಶದ ಚರಿತ್ರೆಯ ಮೇಲೆ ಇವರು ರಚಿಸಿದ ಹೊತ್ತಗೆ (ತಲಕಾಡಿನ ಗಂಗರು) ಇಂದಿಗೂ ಆ ವಂಶದ ಮೇಲಿನ ಏಕೈಕ ಅಧಿಕಾರಯುತ ಗ್ರಂಥ. ಕರ್ಣಾಟಕದ ಇತಿಹಾಸದ ಮೇಲೆ ಇವರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಗ್ಲಿಂಪ್ಸಸ್ ಆಫ್ ಕರ್ಣಾಟಕ ಹಿಸ್ಟೊರಿ ಮತ್ತು ಕರ್ಣಾಟಕ ಇತಿಹಾಸ ದರ್ಶನ-ಇವು ಮುಖ್ಯವಾದವು. ಕರ್ಣಾಟಕ ಇತಿಹಾಸ ದರ್ಶನ ಕನ್ನಡ ನಾಡಿನ 2,000 ವರ್ಷಗಳ ಇತಿಹಾಸದ ಸಮಗ್ರ ನೋಟವನ್ನೊದಗಿಸುವ ದೊಡ್ಡ ಕೃತಿ. ಅವರ ಜೀವನದ ಕೊನೆಯ ಕಾಲದಲ್ಲಿ ಪ್ರಕಟವಾದ ಈ ಪುಸ್ತಕ ಅವರ ಆಳವಾದ ವಿದ್ವತ್ತು ಮತ್ತು ವಿಶಾಲವಾದ ಅನುಭವಗಳ ದ್ಯೋತಕವಾಗಿದೆ.

	ಕೃಷ್ಣರಾಯರು ಬ್ರಿಟನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ ಪಡೆದಿದ್ದರು. ರಾಜ್ಯ ಸರ್ಕಾರದ ಆಶ್ರಯದಲ್ಲಿ ನಡೆದ ಕರ್ಣಾಟಕ ಸ್ವಾತಂತ್ರ್ಯ ಚಳವಳಿಯ ಇತಿಹಾಸದ ರಚನೆಯಲ್ಲೂ ಇವರು ಭಾಗವಹಿಸಿದ್ದರು. ಕನ್ನಡ ವಿಶ್ವಕೋಶದ ಇತಿಹಾಸ ಉಪಸಮಿತಿಯ ಅಧ್ಯಕ್ಷರಾಗಿದ್ದರು. ಇವರ ಹಲವು ಲೇಖನಗಳು ಕನ್ನಡ ವಿಶ್ವಕೋಶದಲ್ಲಿ ಪ್ರಕಟವಾಗಿವೆ.  			 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ